ಎತ್ತಿಗೆ ಯಂತ್ರಗಳು-
	ತೂಕವಾದ ಸಾಮಗ್ರಿಯನ್ನು ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಎತ್ತಿ ಅಥವಾ ಇಳಿಸಿ ಇಡಲು ಬಳಸುವ ಯಾಂತ್ರಿಕ ಸಾಧನಗಳು (ಹಾಯಿಸ್ಟಿಂಗ್ ಮೆಷೀನ್ಸ್). ಗಣಿಯ ತಳದಿಂದ ನೆಲಮಟ್ಟಕ್ಕೆ ಅದುರಿನ ಸಾಗಣೆ, ಕಟ್ಟಡ ನಿರ್ಮಾಣಕಾಲದಲ್ಲಿ ಜನ ಮತ್ತು ಸಾಮಗ್ರಿಗಳ ಮೇಲು-ಕೆಳಗೆ ಸಾಗಣೆ. ಹಡಗು ರೈಲು ಮುಂತಾದೆಡೆಗಳಲ್ಲಿ ಸಾಮಾನು ಸರಂಜಾಮುಗಳ ಪೇರಿಕೆ ಅಥವಾ ಇಳಿಸಿಕೆ-ಇಲ್ಲೆಲ್ಲ ಎತ್ತಿಗೆ ಯಂತ್ರಗಳ ಪಾತ್ರ ಪ್ರಮುಖವಾದದ್ದು. ಯಂತ್ರ ಸ್ಥಿರ ಆಧಾರದ ಮೇಲೆ ಭದ್ರವಾಗಿ ತಳವೂರಿರುತ್ತದೆ; ಅದರ ಚಲಿಸುವ ಭಾಗಗಳು ಸಾಗಿಸಬೇಕಾದ ಸಾಮಗ್ರಿಯನ್ನು ಎತ್ತಿ ಸ್ಥಾನಾಂತರಗೊಳಿಸುತ್ತದೆ. ಆದ್ದರಿಂದ ಇಂಥ ಯಂತ್ರಗಳ ಕಾರ್ಯಕ್ಷೇತ್ರ ಸಹಜವಾಗಿಯೇ ಸೀಮಿತವಾಗಿದೆ. ಕ್ರೇನುಗಳು ಎಲಿವೇಟರುಗಳು ಎತ್ತಿಗೆ ಯಂತ್ರಗಳಿಗೆ ಉದಾಹರಣೆಗಳಾದರೂ ಸಾಮಾನ್ಯವಾಗಿ ಈ ಪದವನ್ನು ಗಣಿಪ್ರದೇಶಗಳಲ್ಲಿ ಬಳಸುವ ಯಾಂತ್ರಿಕ ಸಾಧನಗಳನ್ನು ಕುರಿತು ಬಳಸುತ್ತಾರೆ. 

ಚಿತ್ರ-1

	ಎತ್ತಿಗೆ ಯಂತ್ರಗಳಲ್ಲಿ ಎರಡು ವಿಧದವು ಇವೆ-ವರ್ತುಲನಾಳಿ ಎತ್ತಿಗೆ ಯಂತ್ರ, ಕೋಪ್ ಎತ್ತಿಗೆಯಂತ್ರ. 

	ವರ್ತುಲನಾಳಿಯಲ್ಲಿ ಆವರ್ತಿಸುವ ಒಂದು ದೊಡ್ಡ ಸಿಲಿಂಡರಿದೆ. ಅದನ್ನು ಸುತ್ತಿಕೊಂಡಿರುವ ತಂತಿ ಹಗ್ಗವಿದೆ. ಸಿಲಿಂಡರು ಒಂದು ದಿಶೆಯಲ್ಲಿ ಆವರ್ತಿಸಿದಂತೆ ಅದನ್ನು ತಂತಿಹಗ್ಗ ಸುತ್ತುತ್ತ ಗಿಡ್ಡವಾಗುವುದು. ಪರಿಣಾಮವಾಗಿ ತಂತಿಯ ಬಿಡಿಕೊನೆಗೆ ಲಗತ್ತಿಸಿರುವ ಸಾಮಗ್ರಿ ಮೇಲೆ ಸಾಗುತ್ತದೆ. ವಿರುದ್ಧ ದಿಶೆಯಲ್ಲಿ ಆವರ್ತನೆ ಆದಾಗ ತಂತಿಹಗ್ಗ ಬಿಡುಗಡೆಗೊಳ್ಳುತ್ತ ಉದ್ದವಾಗುವುದು. ಆದ್ದರಿಂದ ಸಾಮಗ್ರಿ ಕೆಳಗೆ ಸಾಗುತ್ತದೆ. ಸಿಲಿಂಡರಿನ ಆವರ್ತನೆಯನ್ನು ಯಾಂತ್ರಿಕ ಶಕ್ತಿಯ ನೆರವಿನಿಂದ ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೆ. 

	ಕೋಪ್ ಎತ್ತಿಗೆ ಯಂತ್ರದಲ್ಲಿ ವಿದ್ಯುಚ್ಛಕ್ತಿಯ ನೆರವಿನಿಂದ ಆವರ್ತಿಸುವ ಸಿಲಿಂಡರಿದೆ. ಸಿಲಿಂಡರಿಗೆ ತಂತಿಹಗ್ಗ ಸುತ್ತುವುದನ್ನು ತಪ್ಪಿಸಲು ಕೋಪ್ ರಾಟೆಯನ್ನು ಉಪಯೋಗಿಸುತ್ತಾರೆ. ಇಲ್ಲಿ ತಂತಿಹಗ್ಗ ಸಿಲಿಂಡರಿನ ಹಾಗೂ ಅಧಿಕ ಘರ್ಷಣೆ ಒದಗಿಸುವ ಕೋಪ್‍ರಾಟೆಯ ಮೂಲಕ (ಅವುಗಳಿಗೆ ಸುತ್ತದೆ) ಸಾಗುತ್ತದೆ. ಹಗ್ಗಕ್ಕೆ ಎಲ್ಲಿಯೂ ಬಿಡಿಕೊನೆಯಿಲ್ಲ. ಕೋಪ್‍ರಾಟೆಯ ಒಂದೊಂದು ಪಾಶ್ರ್ವದ ಹಗ್ಗದಲ್ಲಿ ಒಂದೊಂದು ಪಂಜರದಂತೆ ಜೋಡಿಸಿದೆ. ಸಿಲಿಂಡರ್ ಒಂದು ದಿಶೆಯಲ್ಲಿ ಆವರ್ತಿಸುವಾಗ ಒಂದು ಪಂಜರ ಮೇಲೂ ಇನ್ನೊಂದು ಪಂಜರ ಕೆಳಗೂ ಹೋಗುತ್ತದೆ; ಎದುರು ದಿಶೆಯಲ್ಲಿ ಆವರ್ತಿಸುವಾಗ ಇದರ ವಿರುದ್ಧ ಚಲನೆ ಉಂಟಾಗುತ್ತದೆ. ಅತಿ ಆಳದ ಮತ್ತು ಅಧಿಕ ಉತ್ಪಾದನ ಸಾಮಥ್ರ್ಯವಿರುವ ಗಣಿಗಳಲ್ಲಿ ಕೋಪ್ ವಿಧಾನ ಬಳಕೆಯಲ್ಲಿದೆ. 

ಎತ್ತಿಗೆ ಸಂಕೇತಗಳು : ಗಣಿಕಾಯಿದೆಯ ಪ್ರಕಾರ ಭೂತಳಗಣಿಯ ಪ್ರತಿಮಟ್ಟದಲ್ಲಿಯೂ ಸಂಕೇತ ಸಾಧನಗಳನ್ನು ಅಳವಡಿಸಿರಲೇಬೇಕು. ಎತ್ತಿಗೆ ಕಾರ್ಯ ನಿರ್ವಹಿಸುವವರಿಗೆ (ಟ್ಯಾಂಕ್‍ಮೆನ್ ಎಂದು ಹೆಸರು) ವಿದ್ಯುಚ್ಛಕ್ತಿಯ ನೆರವಿನಿಂದ ಸಾಗುವ ಈ ಸಂಕೇತಗಳು ಪಂಜರದ ಚಲನೆಯನ್ನು ಕುರಿತು ಪ್ರತಿಮಟ್ಟದಲ್ಲಿಯೂ ಉಪಯುಕ್ತ ಸೂಚನೆಗಳನ್ನು ಒದಗಿಸುತ್ತವೆ.

(ಟಿ.ಟಿ.ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ